31
ಅಶ್ಶೂರವು ದೇವದಾರು ಮರದಂತಿರುವದು
1 ಸೆರೆಹಿಡಿದ ಹನ್ನೊಂದನೇ ವರ್ಷದ ಮೂರನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ಇದನ್ನು ಈಜಿಪ್ಟಿನ ರಾಜನಾದ ಫರೋಹನಿಗೂ ಅವನ ಜನರಿಗೂ ಹೇಳು:
“ ‘ನೀನು ಅತ್ಯಂತ ಪ್ರಭಾವಶಾಲಿ,
ನಿನ್ನನ್ನು ಯಾರಿಗೆ ಹೋಲಿಸಲಿ?
3 ಅಶ್ಶೂರವು ಲೆಬನೋನಿನಲ್ಲಿರುವ ದೇವದಾರು ಮರದಂತೆ ಎತ್ತರವಾಗಿ,
ಸುಂದರವಾದ ಕೊಂಬೆಗಳಿಂದಲೂ
ಕಾಡಿನ ನೆರಳಿನಲ್ಲಿಯೂ ಶೋಭಿಸುತ್ತದೆ.
ಅದರ ಮೇಲಿನ ತುದಿಯು ಮುಗಿಲನ್ನು ಮುಟ್ಟುವದು.
4 ನೀರು ಆ ಮರವನ್ನು ಬೆಳೆಯುವಂತೆ ಮಾಡಿತು.
ನದಿಯು ಅದನ್ನು ಎತ್ತರವಾಗುವಂತೆ ಮಾಡಿತು.
ಆ ಮರವು ನೆಡಲ್ಪಟ್ಟ ಸ್ಥಳದ ಸುತ್ತಲೂ ಹೊಳೆಯು ಹರಿಯುತ್ತಿದೆ.
ಆ ಮರದಿಂದ ಬೇರೆ ಮರಗಳಿಗೆ ಸಣ್ಣ ಕಾಲುವೆಗಳು ಹೊರಡುತ್ತವೆ.
5 ಯಾಕೆಂದರೆ ಈ ಮರವು ಬೇರೆ ಮರಗಳಿಗಿಂತ ಉನ್ನತವಾಗಿ ಕಾಣಿಸಿಕೊಳ್ಳಲು,
ಅದು ಅನೇಕ ಕೊಂಬೆಗಳನ್ನು ಬಿಟ್ಟಿತು.
ಅಲ್ಲಿ ಬೇಕಾದಷ್ಟು ನೀರು ಇದ್ದುದರಿಂದ
ಕೊಂಬೆಗಳು ಉದ್ದವಾಗಿಯೂ ವಿಶಾಲವಾಗಿಯೂ ಬೆಳೆದವು.
6 ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ಗೂಡುಗಳನ್ನು ಕಟ್ಟಿದವು.
ಆ ಮರದ ಅಡಿಯಲ್ಲಿ ಪ್ರಾಣಿಗಳು ಮರಿಗಳನ್ನು ಈದವು.
ಆ ಮರದ ನೆರಳಿನಲ್ಲಿ
ಎಲ್ಲಾ ದೊಡ್ಡ ಜನಾಂಗಗಳು ವಾಸಿಸಿದವು.
7 ಆ ಮರವು ಮನೋಹರವಾಗಿತ್ತು.
ಅದು ದೊಡ್ಡದಾಗಿತ್ತು.
ಅದರ ಕೊಂಬೆಗಳು ವಿಶಾಲವಾಗಿದ್ದವು.
ಅದರ ಬೇರುಗಳಿಗೆ ಧಾರಾಳವಾದ ನೀರಿತ್ತು.
8 ದೇವರ ತೋಟದಲ್ಲಿರುವ ದೇವದಾರು ಮರಗಳೂ
ಈ ಮರದಷ್ಟು ಎತ್ತರವಾಗಿರಲಿಲ್ಲ.
ಈ ಮಹಾ ಮರಕ್ಕಿರುವಷ್ಟು ಕೊಂಬೆಗಳು ಸೈಪ್ರಸ್ ಮರಗಳಿಗೂ ಇಲ್ಲ.
ದೇವರ ತೋಟದಲ್ಲಿದ್ದ ಯಾವ ಮರವಾದರೂ ಇದರಷ್ಟು ಅಂದವಾಗಿರಲಿಲ್ಲ.
9 ನಾನು ಅದಕ್ಕೆ ಅನೇಕ ಕೊಂಬೆಗಳನ್ನು ಕೊಟ್ಟು
ಅಂದವಾಗಿ ಕಾಣುವಂತೆ ಮಾಡಿದೆನು.
ದೇವರ ತೋಟವಾಗಿರುವ ಏದೆನಿನಲ್ಲಿರುವ
ಮರಗಳೆಲ್ಲಾ ಅಸೂಯೆಪಡುತ್ತಿದ್ದವು.’ ”
10 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಆ ಮರವು ಎತ್ತರವಾಗಿ ಬೆಳೆಯಿತು. ಅದರ ತುದಿ ಮುಗಿಲನ್ನು ಮುಟ್ಟಿತು. ಇದು ಅದಕ್ಕೆ ಹೆಮ್ಮೆಯನ್ನು ತಂದಿತು.
11 ಆಗ ನಾನು ಒಬ್ಬ ಬಲಾಢ್ಯನಾದ ರಾಜನು ಬಂದು ಆ ಮರವನ್ನು ತೆಗೆದುಕೊಳ್ಳುವಂತೆ ಮಾಡಿದೆನು. ಆ ರಾಜನು ಮರವು ಮಾಡಿದ ದುಷ್ಕೃತ್ಯಗಳಿಗಾಗಿ ಅದನ್ನು ಶಿಕ್ಷಿಸಿದನು. ಆ ಮರವನ್ನು ನಾನು ನನ್ನ ತೋಟದಿಂದ ತೆಗೆದು ಹಾಕಿದೆನು.
12 ಪರದೇಶದ ಕ್ರೂರ ಜನರು ಅದನ್ನು ಕಡಿದು ಅದರ ರೆಂಬೆಗಳನ್ನೆಲ್ಲಾ ಬೆಟ್ಟ, ಬಯಲು, ತಗ್ಗುಗಳಲ್ಲಿ ಚದರಿಸಿಬಿಟ್ಟರು. ಅದರ ಮುರಿಯಲ್ಪಟ್ಟ ಕೊಂಬೆಗಳು ಆ ದೇಶದಲ್ಲಿ ಹರಿಯುವ ನದಿಯಲ್ಲಿ ತೇಲಿದವು. ಆ ಮರದಡಿಯಲ್ಲಿ ಈಗ ನೆರಳು ಇಲ್ಲ. ಆದ್ದರಿಂದ ಅಲ್ಲಿ ವಾಸವಾಗಿದ್ದ ಜನರೆಲ್ಲಾ ಅಲ್ಲಿಂದ ಹೊರಟುಹೋದರು.
13 ಕೆಳಗೆ ಬಿದ್ದ ಮರದ ಮೇಲೆ ಪಕ್ಷಿಗಳು ವಾಸಿಸಿದವು. ಕೆಳಗೆ ಬಿದ್ದ ಅದರ ಕೊಂಬೆಗಳ ಮೇಲೆ ಕಾಡುಪ್ರಾಣಿಗಳು ನಡೆದವು.
14 “ಈಗ ಆ ನೀರಿನ ಬಳಿಯಲ್ಲಿರುವ ಯಾವ ಮರಗಳೂ ಹೆಮ್ಮೆಪಡುವದಿಲ್ಲ. ಅವು ಮುಗಿಲನ್ನು ಮುಟ್ಟಲು ಪ್ರಯತ್ನಿಸುವದಿಲ್ಲ. ಚೆನ್ನಾಗಿ ಬೆಳೆದ ಮರಗಳು ಆ ನೀರನ್ನು ಕುಡಿದು ತಾನು ಉದ್ದವಾಗಿ ಬೆಳೆದಿದ್ದೇನೆ ಎಂದು ಕೊಚ್ಚಿಕೊಳ್ಳುವದಿಲ್ಲ. ಯಾಕೆಂದರೆ ಎಲ್ಲವೂ ಸಾಯುವುದಕ್ಕಾಗಿ ನೇಮಕಗೊಂಡಿವೆ. ಅವುಗಳೆಲ್ಲಾ ಮರಣದ ಸ್ಥಳವನ್ನು ಸೇರುವವು. ಅಲ್ಲಿ ಸತ್ತು, ಮರಣದ ಆ ಸ್ಥಳಕ್ಕೆ ಹೋಗಿ ಪಾತಾಳಕ್ಕೆ ಸೇರಿದವರನ್ನು ಸೇರುವವು.”
15 ನನ್ನ ಒಡೆಯನಾದ ಯೆಹೋವನು ಇದನ್ನು ನುಡಿದಿದ್ದಾನೆ: “ಆ ಮರವು ಪಾತಾಳಕ್ಕೆ ಹೋದ ದಿವಸದಲ್ಲಿ ನಾನು ಜನರನ್ನು ಅಳುವಂತೆ ಮಾಡಿದೆನು. ಅದನ್ನು ನಾನು ಆಳವಾದ ಸಾಗರದಿಂದ ಮುಚ್ಚಿಬಿಟ್ಟೆನು. ನಾನು ಅದರ ನದಿಗಳನ್ನೂ ಬೇರೆ ನೀರಿನ ತೊರೆಗಳನ್ನೂ ನಿಲ್ಲಿಸಿಬಿಟ್ಟೆನು. ಲೆಬನೋನ್ ಅದಕ್ಕಾಗಿ ಶೋಕಿಸುವಂತೆ ಮಾಡಿದೆನು. ಆ ದೊಡ್ಡ ಮರವು ಹೋದುದಕ್ಕಾಗಿ ಆ ಪ್ರಾಂತ್ಯದ ಬೇರೆ ಎಲ್ಲಾ ಮರಗಳು ದುಃಖದಿಂದ ಕಾಯಿಲೆಯಲ್ಲಿ ಬಿದ್ದವು.
16 ನಾನು ಆ ಮರವನ್ನು ಬೀಳಿಸಿದೆನು. ಬೀಳುವ ಅದರ ಶಬ್ದವನ್ನು ಕೇಳಿ ರಾಜ್ಯಗಳೆಲ್ಲಾ ಭಯದಿಂದ ನಡುಗಿದವು. ನಾನು ಆ ಮರವನ್ನು ಪಾತಾಳಕ್ಕೆ ಕಳುಹಿಸಿದೆನು. ಅದು ಹೋಗಿ ಅದಕ್ಕಿಂತ ಮೊದಲೇ ಆ ಆಳವಾದ ಗುಂಡಿಗೆ ಹೋಗಿರುವವರೊಂದಿಗೆ ಸೇರಿಕೊಂಡಿತು. ಗತಿಸಿದ ದಿವಸಗಳಲ್ಲಿ ಏದೆನಿನಲ್ಲಿದ್ದ ಎಲ್ಲಾ ಮರಗಳು, ಲೆಬನೋನಿನ ಉತ್ಕೃಷ್ಟ ಮರಗಳು ಆ ನೀರನ್ನು ಕುಡಿದಿದ್ದವು. ಅವೆಲ್ಲವೂ ಪಾತಾಳದಲ್ಲಿ ಸಂತೈಸಿಕೊಂಡವು.
17 ಹೌದು, ಆ ಮರವೂ ಅದರ ನೆರಳಿನ ಆಶ್ರಯವನ್ನು ಪಡೆದುಕೊಂಡಿದ್ದ ಅದರ ಎಲ್ಲಾ ಸಂತತಿಗಳವರೂ ಯುದ್ಧದಲ್ಲಿ ಸತ್ತುಹೋಗಿದ್ದ ಸೈನಿಕರೊಂದಿಗೆ ಇರುವದಕ್ಕಾಗಿ ಪಾತಾಳಕ್ಕೆ ಇಳಿದು ಹೋಗಿದ್ದವು.
18 “ಈಜಿಪ್ಟೇ, ಏದೆನಿನಲ್ಲಿ ಎಷ್ಟೋ ದೊಡ್ಡ, ಬಲಶಾಲಿಯಾಗಿರುವ ಮರಗಳಿವೆ. ಅದರ ಯಾವ ಮರಕ್ಕೆ ನಿನ್ನನ್ನು ಹೋಲಿಸಲಿ? ಅವೆಲ್ಲವೂ ಭೂಮಿಯ ಕೆಳಗೆ ಪಾತಾಳವನ್ನು ಸೇರಿದವು. ನೀನು ಕೂಡಾ ಆ ಪರದೇಶಸ್ಥರೊಂದಿಗೆ ಆ ಸ್ಥಳಕ್ಕೆ ಸೇರುವಿ. ರಣರಂಗದಲ್ಲಿ ಸತ್ತವರೊಂದಿಗೆ ನೀನು ಬಿದ್ದುಕೊಳ್ಳುವಿ.
“ಹೌದು, ಈ ರೀತಿಯಾಗಿ ಫರೋಹನಿಗೂ ಅವನೊಂದಿಗಿರುವ ಜನರ ಗುಂಪಿಗೂ ಆಗುವದು.” ಇದು ಒಡೆಯನಾದ ಯೆಹೋವನ ನುಡಿ.